ಬೈಬಲ್ · Indian Revised Version (Kannada) 2019
ಕೀರ್ತನೆಗಳು 126
1 ಸೆರೆಯಲ್ಲಿದ್ದ ನಮ್ಮನ್ನು ಯೆಹೋವನು ತಿರುಗಿ ಚೀಯೋನಿಗೆ ಬರಮಾಡಿದಾಗ, ನಾವು ಕನಸು ಕಂಡವರಂತೆ ಇದ್ದೆವು.
2 ಆಗ ನಮ್ಮ ಬಾಯಿ ಬಲು ನಗೆಯಿಂದಲೂ, ನಮ್ಮ ನಾಲಿಗೆ ಹರ್ಷಗೀತದಿಂದಲೂ ತುಂಬಿದವು. ಅನ್ಯಜನರು, “ಯೆಹೋವನು ಇವರಿಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದಾನೆ” ಎಂದು ತಮ್ಮೊಳಗೆ ಮಾತನಾಡಿಕೊಳ್ಳುತ್ತಿದ್ದರು.
3 ಯೆಹೋವನು ನಮಗೋಸ್ಕರ ಮಹತ್ಕಾರ್ಯಗಳನ್ನು ಮಾಡಿದ್ದು ನಿಜ; ಆದುದರಿಂದ ನಾವು ಸಂತೋಷವುಳ್ಳವರಾಗಿದ್ದೇವೆ.
4 ಯೆಹೋವನೇ, ನೀನು ದಕ್ಷಿಣದೇಶದ ಹಳ್ಳಗಳನ್ನೋ ಎಂಬಂತೆ, ಸೆರೆಯಲ್ಲಿ ಉಳಿದಿರುವ ನಮ್ಮವರನ್ನೂ ತಿರುಗಿ ಬರಮಾಡು.
5 ಅಳುತ್ತಾ ಬಿತ್ತುವವರು, ಹಾಡುತ್ತಾ ಕೊಯ್ಯುವರು,
6 ದುಃಖಿಸುತ್ತಾ ಬೀಜವನ್ನು ತೆಗೆದುಕೊಂಡು ಹೋಗುವವನು, ಹರ್ಷಿಸುತ್ತಾ ಸಿವುಡುಗಳನ್ನು ಹೊತ್ತುಕೊಂಡು ಬರುವನು.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0