ಬೈಬಲ್ · Indian Revised Version (Kannada) 2019
ಕೀರ್ತನೆಗಳು 98
1 ಯೆಹೋವನಿಗೆ ಹೊಸ ಕೀರ್ತನೆಯನ್ನು ಹಾಡಿರಿ; ಆತನು ಅದ್ಭುತಕೃತ್ಯಗಳನ್ನು ನಡೆಸಿದ್ದಾನೆ. ಆತನ ಬಲಗೈಯೂ, ಪರಿಶುದ್ಧಬಾಹುವೂ ಜಯವನ್ನು ಉಂಟುಮಾಡಿವೆ.
2 ಯೆಹೋವನು ತನ್ನ ರಕ್ಷಣೆಯನ್ನು ಪ್ರಕಟಿಸಿದ್ದಾನೆ; ಜನಾಂಗಗಳೆದುರಿಗೆ ತನ್ನ ನೀತಿಯನ್ನು ತೋರ್ಪಡಿಸಿದ್ದಾನೆ.
3 ಆತನು ಇಸ್ರಾಯೇಲನ ಮನೆತನದವರ ಬಗ್ಗೆ ಇದ್ದ, ತನ್ನ ಪ್ರೀತಿ, ಸತ್ಯತೆಗಳನ್ನು ನೆನಪುಮಾಡಿಕೊಂಡಿದ್ದಾನೆ. ಭೂಲೋಕದ ಎಲ್ಲಾ ಕಡೆಯವರೂ, ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡಿದ್ದಾರೆ.
4 ಸಮಸ್ತ ಭೂನಿವಾಸಿಗಳೇ, ಯೆಹೋವನಿಗೆ ಜಯಘೋಷಮಾಡಿರಿ; ಹರ್ಷಿಸಿರಿ, ಉತ್ಸಾಹಧ್ವನಿಮಾಡಿ ಹಾಡಿರಿ.
5 ಕಿನ್ನರಿಯೊಡನೆ ಯೆಹೋವನನ್ನು ಸ್ತುತಿಸಿರಿ; ಕಿನ್ನರಿಯನ್ನು ನುಡಿಸುತ್ತಾ ಭಜಿಸಿರಿ.
6 ತುತ್ತೂರಿಗಳನ್ನೂ, ಕೊಂಬನ್ನೂ ಊದುತ್ತಾ, ಯೆಹೋವರಾಜನಿಗೆ ಜಯಘೋಷಮಾಡಿರಿ.
7 ಯೆಹೋವನ ಮುಂದೆ ಸಮುದ್ರವೂ, ಅದರಲ್ಲಿರುವುದೆಲ್ಲವೂ, ಭೂಮಿಯೂ, ಅದರ ನಿವಾಸಿಗಳೂ ಘೋಷಿಸಲಿ.
8 ನದಿಗಳು ಚಪ್ಪಾಳೆ ಹೊಡೆಯಲಿ; ಪರ್ವತಗಳೆಲ್ಲಾ ಉತ್ಸಾಹಧ್ವನಿಮಾಡಲಿ.
9 ಆತನು ಭೂನಿವಾಸಿಗಳಿಗೆ ನ್ಯಾಯತೀರಿಸಲಿಕ್ಕೆ ಬರುತ್ತಾನೆ; ಆತನು ಲೋಕಕ್ಕೆ ನೀತಿಗನುಸಾರವಾಗಿಯೂ, ಜನಾಂಗಗಳಿಗೆ ಯಥಾರ್ಥವಾಗಿಯೂ ತೀರ್ಪುಕೊಡುವನು.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0