ಬೈಬಲ್ · Indian Revised Version (Kannada) 2019
ಕೀರ್ತನೆಗಳು 97
1 ಯೆಹೋವನು ರಾಜ್ಯಾಧಿಕಾರವನ್ನು ವಹಿಸಿದ್ದಾನೆ; ಭೂಲೋಕವು ಸಂತೋಷಿಸಲಿ; ಸಮುದ್ರದ ತೀರಪ್ರದೇಶಗಳೆಲ್ಲಾ ಹರ್ಷಿಸಲಿ.
2 ಮೋಡಗಳೂ, ಕಾರ್ಗತ್ತಲೆಯೂ ಆತನ ಸುತ್ತಲೂ ಇರುತ್ತವೆ; ಯೆಹೋವನು ನೀತಿ ಮತ್ತು ನ್ಯಾಯಗಳಿಂದ ಆಳುತ್ತಾನೆ.
3 ಬೆಂಕಿಯು ಆತನ ಮುಂದೆ ಹೋಗಿ, ಸುತ್ತಲೂ ಆವರಿಸಿ ಆತನ ವೈರಿಗಳನ್ನು ದಹಿಸಿಬಿಡುತ್ತದೆ.
4 ಆತನ ಮಿಂಚುಗಳು ಲೋಕವನ್ನು ಬೆಳಗಿಸಿದವು; ಭೂಮಿಯು ಅದನ್ನು ಕಂಡು ನಡುಗಿತು.
5 ಸಾರ್ವಭೌಮನಾದ ಯೆಹೋವನ ಎದುರಿನಲ್ಲಿ ಪರ್ವತಗಳು ಮೇಣದಂತೆ ಕರಗಿಹೋದವು.
6 ಗಗನಮಂಡಲವು ಆತನ ನೀತಿಯನ್ನು ಪ್ರಸಿದ್ಧಪಡಿಸಿತು; ಎಲ್ಲಾ ಜನರು ಆತನ ಮಹಿಮೆಯನ್ನು ಕಂಡರು.
7 ವಿಗ್ರಹಗಳಲ್ಲಿ ಹಿಗ್ಗುವವರೂ, ಮೂರ್ತಿಪೂಜಕರೆಲ್ಲರೂ ನಾಚಿಕೆಗೆ ಒಳಪಡುವರು; ದೇವರುಗಳೆಂದು ಕರೆಯಲ್ಪಡುವವರೇ, ನೀವೆಲ್ಲರೂ ಆತನಿಗೆ ಅಡ್ಡಬೀಳಿರಿ.
8 ಯೆಹೋವನೇ, ನೀನು ನ್ಯಾಯಸ್ಥಾಪಿಸಿದ ವಾರ್ತೆಯನ್ನು ಕೇಳಿ ಚೀಯೋನ್ ಪಟ್ಟಣವು ಹರ್ಷಿಸಿತು; ಯೆಹೂದ ಪ್ರಾಂತ್ಯದ ಊರುಗಳು ಸಂತೋಷಿಸಿದವು.
9 ಯೆಹೋವನೇ, ನೀನು ಭೂಲೋಕದ ಸರ್ವಾಧಿಕಾರಿ; ಎಲ್ಲಾ ದೇವರುಗಳಲ್ಲಿ ಮಹೋನ್ನತನು ನೀನೇ.
10 ಕೆಟ್ಟತನವನ್ನು ಹಗೆಮಾಡುವವರನ್ನು, ಯೆಹೋವನನ್ನು ಪ್ರೀತಿಸುತ್ತಾನೆ. ಆತನು ತನ್ನ ಭಕ್ತರ ಪ್ರಾಣಗಳನ್ನು ಕಾಯುವವನಾಗಿ, ದುಷ್ಟರ ಕೈಯೊಳಗಿಂದ ಅವರನ್ನು ಬಿಡಿಸುವನು.
11 ನೀತಿವಂತರಿಗೋಸ್ಕರ ಬೆಳಕು ಪ್ರಕಾಶಿಸುವುದು, ಯಥಾರ್ಥಹೃದಯವುಳ್ಳವರಿಗೆ ಸಂತೋಷವೂ ಕೊಡಲ್ಪಟ್ಟಿವೆ.
12 ನೀತಿವಂತರೇ, ಯೆಹೋವನಲ್ಲಿ ಆನಂದಿಸಿರಿ; ಆತನ ಪರಿಶುದ್ಧನಾಮವನ್ನು ಕೊಂಡಾಡಿರಿ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0