ಬೈಬಲ್ · Indian Revised Version (Kannada) 2019

ಕೀರ್ತನೆಗಳು 82

1 ದೇವರು ತನ್ನ ಸಭೆಯಲ್ಲಿ ನಿಂತುಕೊಂಡವನಾಗಿ, ದೇವರುಗಳೆಂದು ಕರೆಯಲ್ಪಡುವವರೊಳಗೆ ನ್ಯಾಯವಿಧಿಸುತ್ತಾನೆ.

2 “ನೀವು ಅನ್ಯಾಯವಾಗಿ ತೀರ್ಪುಕೊಡುವುದೂ, ದುಷ್ಟರಿಗೆ ಮುಖದಾಕ್ಷಿಣ್ಯ ತೋರಿಸುವುದೂ ಇನ್ನೆಷ್ಟರವರೆಗೆ? ಸೆಲಾ.

3 ಕುಗ್ಗಿದವರ ಮತ್ತು ಅನಾಥರ ನ್ಯಾಯವನ್ನು ಸ್ಥಾಪಿಸಿರಿ, ದುಃಖಿತರ ಮತ್ತು ದರಿದ್ರರ ನೀತಿಯನ್ನು ಉಳಿಸಿರಿ.

4 ಕುಗ್ಗಿದವರನ್ನು, ಬಡವರನ್ನು ದುಷ್ಟರ ಕೈಯಿಂದ ಬಿಡಿಸಿ ರಕ್ಷಿಸಿರಿ.”

5 ಇವರು ಬುದ್ಧಿಹೀನರೂ, ವಿವೇಕಶೂನ್ಯರೂ ಆಗಿ ಅಂಧಕಾರದಲ್ಲಿ ಅಲೆಯುತ್ತಾರೆ. ಭೂಮಿಯ ಅಸ್ತಿವಾರಗಳೆಲ್ಲಾ ಕದಲುತ್ತವೆ.

6 “ನೀವು ದೇವರುಗಳು, ಎಲ್ಲರೂ ಪರಾತ್ಪರನಾದ ದೇವರ ಮಕ್ಕಳು,

7 ಆದರೂ ನರರಂತೆ ಸತ್ತೇ ಹೋಗುವಿರಿ, ಪ್ರತಿಯೊಬ್ಬ ಪ್ರಭುವಿನಂತೆ ನೀವೆಲ್ಲರೂ ಬಿದ್ದು ಹೋಗುವಿರಿ” ಎಂದು ನಾನು ಹೇಳಿದೆನು.

8 ದೇವರೇ, ಏಳು; ಭೂಲೋಕದಲ್ಲಿ ನ್ಯಾಯವನ್ನು ಸ್ಥಾಪಿಸು. ನೀನು ಎಲ್ಲಾ ಜನಾಂಗಗಳ ಒಡೆಯನು ಅಲ್ಲವೋ?

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0