ಬೈಬಲ್ · Indian Revised Version (Kannada) 2019

ಕೀರ್ತನೆಗಳು 130

1 ಯೆಹೋವನೇ, ಪಾತಾಳದಲ್ಲಿದ್ದು ನಿನ್ನನ್ನು ಕೂಗಿಕೊಳ್ಳುತ್ತೇನೆ.

2 ಕರ್ತನೇ, ನನ್ನ ಮೊರೆಯನ್ನು ಕೇಳು; ನನ್ನ ವಿಜ್ಞಾಪನೆಯ ಶಬ್ದಕ್ಕೆ ಕಿವಿದೆರೆ.

3 ಕರ್ತನೇ, ಯೆಹೋವನೇ, ನೀನು ಪಾಪಗಳನ್ನು ಲೆಕ್ಕಿಸುವುದಾದರೆ ನಿನ್ನ ಮುಂದೆ ಯಾರು ನಿಲ್ಲಲು ಸಾಧ್ಯ?

4 ನೀನು ಪಾಪವನ್ನು ಕ್ಷಮಿಸುವವನಾದುದರಿಂದ, ಮನುಷ್ಯರ ಭಯಭಕ್ತಿಗೆ ನೀನೇ ಪಾತ್ರನು.

5 ನಾನು ಯೆಹೋವನನ್ನು ಎದುರುನೋಡುತ್ತೇನೆ; ನನ್ನ ಪ್ರಾಣವು ಆತನನ್ನು ಕಾದುಕೊಂಡಿದೆ; ಆತನ ನುಡಿಯನ್ನು ನಿರೀಕ್ಷಿಸಿಕೊಂಡಿದ್ದೇನೆ.

6 ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುತ್ತಾರಲ್ಲಾ; ಕಾವಲುಗಾರರು ಬೆಳಗಾಗುವುದನ್ನು ಮುನ್ನೋಡುವುದಕ್ಕಿಂತ ವಿಶೇಷವಾಗಿ, ನನ್ನ ಅಂತರಾತ್ಮವು ಕರ್ತನನ್ನು ಮುನ್ನೋಡುತ್ತದೆ.

7 ಇಸ್ರಾಯೇಲೇ, ಯೆಹೋವನನ್ನು ಎದುರುನೋಡುತ್ತಿರು; ಯೆಹೋವನು ಕೃಪಾಸಂಪನ್ನನು; ಪೂರ್ಣವಿಮೋಚನೆಯು ಆತನಿಂದಲೇ ದೊರಕುವುದು.

8 ಆತನೇ ಇಸ್ರಾಯೇಲನ್ನು ಅದರ ಸಕಲ ಪಾಪಗಳಿಂದ ವಿಮೋಚಿಸುವನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0