ಬೈಬಲ್ · Indian Revised Version (Kannada) 2019

ಕೀರ್ತನೆಗಳು 14

1 ದುರ್ಮತಿಗಳು ತಮ್ಮ ಮನಸ್ಸಿನಲ್ಲಿ, “ದೇವರೇ ಇಲ್ಲ” ಎಂದು ಅಂದುಕೊಳ್ಳುತ್ತಾರೆ; ಅವರು ಕೆಟ್ಟುಹೋದವರು; ಹೇಯವಾದ ಅಕ್ರಮಗಳನ್ನು ನಡೆಸುತ್ತಾರೆ. ಅವರಲ್ಲಿ ಒಳ್ಳೆಯದನ್ನು ಮಾಡುವವರೇ ಇಲ್ಲ.

2 ಮನುಷ್ಯರಲ್ಲಿ ತನ್ನ ಸಾನ್ನಿಧ್ಯವನ್ನು ಅಪೇಕ್ಷಿಸುವ ಬುದ್ಧಿವಂತರು ಇದ್ದಾರೋ, ಎಂದು ಯೆಹೋವನು ಆಕಾಶದಿಂದ ಮನುಷ್ಯರನ್ನು ನೋಡಲಾಗಿ,

3 ಒಳ್ಳೆಯದನ್ನು ಮಾಡುವವನು ಇಲ್ಲ, ಒಬ್ಬನಾದರೂ ಇಲ್ಲ. ಪ್ರತಿಯೊಬ್ಬನೂ ದಾರಿತಪ್ಪಿದವನು, ಎಲ್ಲರೂ ಕೆಟ್ಟು ಹೋದವರೇ.

4 ದುಷ್ಟತ್ವವನ್ನು ನಡೆಸುವವರೆಲ್ಲರು ತಿಳಿಯುವುದಿಲ್ಲವೋ? ಅವರು ನನ್ನ ಜನರನ್ನು ಆಹಾರವನ್ನೋ ಎಂಬಂತೆ ನುಂಗಿಬಿಡುತ್ತಾರೆ; ಯೆಹೋವನನ್ನು ಸ್ಮರಿಸುವುದಿಲ್ಲ.

5 ಅವರು ಫಕ್ಕನೆ ಭಯಭ್ರಾಂತರಾಗುವರು; ಏಕೆಂದರೆ ದೇವರು ನೀತಿವಂತರ ಪಕ್ಷದಲ್ಲಿದ್ದಾನೆ.

6 ನೀವು ಕುಗ್ಗಿದವರ ಸಂಕಲ್ಪವನ್ನು ಭಂಗಪಡಿಸಿದರೂ ಯೆಹೋವನು ಅವರ ಆಶ್ರಯವಲ್ಲವೇ.

7 ಚೀಯೋನಿನಿಂದ ಇಸ್ರಾಯೇಲರಿಗೆ ರಕ್ಷಣೆಯು ಬೇಗನೆ ಬರಲಿ. ಯೆಹೋವನು ತನ್ನ ಜನರನ್ನು ದುರವಸ್ಥೆಯಿಂದ ತಪ್ಪಿಸಿದಾಗ, ಆತನ ಪ್ರಜೆಗಳಾಗಿರುವ ಯಾಕೋಬವಂಶದವರು ಉಲ್ಲಾಸಗೊಳ್ಳುವರು, ಇಸ್ರಾಯೇಲರು ಹರ್ಷಿಸುವರು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0