ಬೈಬಲ್ · Indian Revised Version (Kannada) 2019

ಕೀರ್ತನೆಗಳು 132

1 ಯೆಹೋವನೇ, ದಾವೀದನ ಹಿತಕ್ಕೋಸ್ಕರ, ಅವನ ಶ್ರಮೆಗಳನ್ನು ನೆನಪುಮಾಡಿಕೋ.

2 ಯಾಕೋಬನ ಶೂರನಾದ ಯೆಹೋವನಿಗಾಗಿ ಒಂದು ವಾಸಸ್ಥಾನವನ್ನು ಏರ್ಪಡಿಸುವ ತನಕ,

3 “ನಾನು ನನ್ನ ಮನೆಯೊಳಗೆ ಪ್ರವೇಶಿಸುವುದಿಲ್ಲ, ಮಂಚವನ್ನು ಹತ್ತುವುದಿಲ್ಲ,

4 ಕಣ್ಣುಗಳನ್ನು ಮುಚ್ಚುವುದಿಲ್ಲ, ರೆಪ್ಪೆಗಳನ್ನು ಕೂಡಿಸುವುದಿಲ್ಲ” ಎಂದು

5 ಅವನು ಯೆಹೋವನಿಗೆ ಪ್ರಮಾಣಮಾಡಿ, ಯಾಕೋಬನ ಶೂರನಿಗೆ ಹರಕೆ ಮಾಡಿಕೊಂಡನಲ್ಲಾ.

6 ಇಗೋ, ಅದು ಎಫ್ರಾತದಲ್ಲಿರುತ್ತದೆಂದು ಕೇಳಿದೆವು; ಯಹಾರ್ ಮೈದಾನದಲ್ಲಿ ನಮಗೆ ಸಿಕ್ಕಿತು.

7 “ಬನ್ನಿರಿ, ಆತನ ಮಂದಿರಕ್ಕೆ ಹೋಗಿ ಆತನ ಪಾದಪೀಠದ ಮುಂದೆ ಅಡ್ಡಬೀಳೋಣ!”

8 ಯೆಹೋವನೇ, ಎದ್ದು ನಿನ್ನ ಪ್ರತಾಪಯುಕ್ತವಾದ ಮಂಜೂಷದೊಡನೆ, ನಿನ್ನ ವಾಸಸ್ಥಾನಕ್ಕೆ ಬಂದು ನೆಲೆಸು.

9 ನಿನ್ನ ಯಾಜಕರು ನೀತಿಯೆಂಬ ವಸ್ತ್ರವನ್ನು ಹೊದ್ದುಕೊಳ್ಳಲಿ; ನಿನ್ನ ಭಕ್ತರು ಉತ್ಸಾಹಧ್ವನಿ ಮಾಡಲಿ.

10 ನಿನ್ನ ಸೇವಕನಾದ ದಾವೀದನನ್ನು ನೆನಪುಮಾಡಿಕೋ; ನೀನು ಅಭಿಷೇಕಿಸಿದವನನ್ನು ತಳ್ಳಿಬಿಡಬೇಡ.

11 ಯೆಹೋವನು ದಾವೀದನಿಗೆ ಮಾಡಿದ ಪ್ರಮಾಣವು ಸ್ಥಿರವಾಗಿದೆ; ಆತನು ಅದನ್ನು ಬದಲಿಸುವುದಿಲ್ಲ. “ನಿನ್ನ ಸಂತಾನದವರನ್ನು ನಿನ್ನ ಸಿಂಹಾಸನದ ಮೇಲೆ ಕುಳ್ಳಿರಿಸುವೆನು;

12 ನಿನ್ನ ಮಕ್ಕಳು ನನ್ನ ನಿಬಂಧನೆಯನ್ನೂ, ನಾನು ಆಜ್ಞಾಪಿಸಿದ ಕಟ್ಟಳೆಗಳನ್ನೂ ಕೈಕೊಂಡು ನಡೆಯುವುದಾದರೆ, ಅವರ ಮಕ್ಕಳು ನಿನ್ನ ಸಿಂಹಾಸನದಲ್ಲಿ ಸದಾಕಾಲ ಕುಳಿತುಕೊಳ್ಳುವರು.”

13 ನಿಶ್ಚಯವಾಗಿ ಯೆಹೋವನು ಚೀಯೋನನ್ನು ಅಪೇಕ್ಷಿಸಿ, ತನ್ನ ನಿವಾಸಕ್ಕಾಗಿ ಆರಿಸಿಕೊಂಡಿದ್ದಾನೆ.

14 ಆತನು, “ಇದು ನನ್ನ ಶಾಶ್ವತ ವಾಸಸ್ಥಾನ; ಇಲ್ಲೇ ಇರುವೆನು; ಇದು ನನಗೆ ಇಷ್ಟ.

15 ಇದರ ಆದಾಯವನ್ನು ಆಶೀರ್ವದಿಸುವೆನು; ಇಲ್ಲಿಯ ಬಡವರನ್ನು ಆಹಾರದಿಂದ ತೃಪ್ತಿಗೊಳಿಸುವೆನು;

16 ಯಾಜಕರಿಗೆ ರಕ್ಷಣೆಯೆಂಬ ವಸ್ತ್ರವನ್ನು ಹೊದಿಸುವೆನು; ಭಕ್ತರು ಉತ್ಸಾಹಧ್ವನಿ ಮಾಡುವರು.

17 ಇಲ್ಲಿಯೇ ದಾವೀದನ ಕೊಂಬು ಚಿಗುರುವಂತೆ ಮಾಡುವೆನು; ನನ್ನ ಅಭಿಷಿಕ್ತನ ದೀಪವು ಉರಿಯುತ್ತಲೇ ಇರಬೇಕೆಂದು ನೇಮಿಸಿದ್ದೇನೆ.

18 ಅವನ ವೈರಿಗಳನ್ನು ನಾಚಿಕೆಯೆಂಬ ವಸ್ತ್ರದಿಂದ ಹೊದಿಸುವೆನು; ಆದರೆ ಅವನ ಮೇಲೆ ಕಿರೀಟವು ಶೋಭಿಸುತ್ತಿರುವುದು.”

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0