ಬೈಬಲ್ · Indian Revised Version (Kannada) 2019

ಕೀರ್ತನೆಗಳು 101

1 ಪ್ರೀತಿ, ನೀತಿಗಳನ್ನು ಕುರಿತು ಹಾಡುವೆನು; ಯೆಹೋವನೇ, ನಿನ್ನನ್ನು ಕೊಂಡಾಡುವೆನು.

2 ಸನ್ಮಾರ್ಗವನ್ನು ಲಕ್ಷಿಸಿ ನಡೆಯುವೆನು; ನನಗೆ ಯಾವಾಗ ದರ್ಶನಕೊಡುವಿ? ಮನೆಯೊಳಗೂ ಯಥಾರ್ಥ ಹೃದಯದಿಂದಲೇ ನಡೆದುಕೊಳ್ಳುವೆನು.

3 ಯಾವ ನೀಚವಾದ ಕಾರ್ಯವನ್ನೂ ದೃಷ್ಟಿಸುವುದಿಲ್ಲ; ದುರಾಚಾರವನ್ನು ಹಗೆಮಾಡುತ್ತೇನೆ, ಅದರ ಗೊಡವೆಯೇ ನನಗೆ ಬೇಡ.

4 ಮೂರ್ಖತನವು ನನ್ನನ್ನು ಬಿಟ್ಟು ಹೋಗಲಿ; ಕೆಟ್ಟತನವನ್ನು ಅರಿಯದಿರುವೆನು.

5 ಗುಪ್ತದಲ್ಲಿ ನೆರೆಯವನ ಮೇಲೆ ಚಾಡಿ ಹೇಳುವವನನ್ನು ಸಂಹರಿಸುವೆನು; ಸೊಕ್ಕಿನ ಕಣ್ಣೂ, ಉಬ್ಬಿದ ಮನಸ್ಸೂ ಉಳ್ಳವನನ್ನು ಸಹಿಸುವುದಿಲ್ಲ.

6 ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು; ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು, ಸನ್ಮಾರ್ಗಿಯೇ ನನ್ನ ಸೇವೆಯಲ್ಲಿರಬೇಕು.

7 ಮೋಸಗಾರನು ನನ್ನ ಮನೆಯಲ್ಲಿ ಇರಲೇಬಾರದು; ಸುಳ್ಳುಗಾರನು ನನ್ನ ಮುಂದೆ ನಿಲ್ಲಕೂಡದು.

8 ಯೆಹೋವನ ಪಟ್ಟಣದಲ್ಲಿ ಕೆಡುಕರೇ ಉಳಿಯದಂತೆ, ಪ್ರತಿ ಮುಂಜಾನೆಯಲ್ಲಿ ದೇಶದ ದುಷ್ಟರನ್ನು ಸಂಹರಿಸುತ್ತಾ ಬರುವೆನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0