ಬೈಬಲ್ · Indian Revised Version (Kannada) 2019

ಕೀರ್ತನೆಗಳು 85

1 ಯೆಹೋವನೇ, ನಿನ್ನ ದೇಶವನ್ನು ಕಟಾಕ್ಷಿಸಿದ್ದಿ; ಯಾಕೋಬ್ಯರನ್ನು ಸೆರೆಯಿಂದ ಬಿಡಿಸಿ ಬರಮಾಡಿದ್ದಿ.

2 ನಿನ್ನ ಪ್ರಜೆಯ ದ್ರೋಹವನ್ನು ಕ್ಷಮಿಸಿದ್ದಿ; ಅವರ ಎಲ್ಲಾ ಪಾಪಗಳನ್ನು ಅಳಿಸಿಬಿಟ್ಟಿದ್ದಿ. ಸೆಲಾ

3 ನಿನ್ನ ರೌದ್ರವನ್ನೆಲ್ಲಾ ತೊರೆದಿದ್ದಿ; ನಿನ್ನ ಉಗ್ರಕೋಪವನ್ನು ಬಿಟ್ಟಿದ್ದಿ.

4 ನಮ್ಮನ್ನು ರಕ್ಷಿಸುವ ದೇವರೇ, ನಮಗೆ ಅಭಿಮುಖನಾಗು; ನಮ್ಮ ವಿಷಯದಲ್ಲಿ ಬೇಸರವನ್ನು ಬಿಡು.

5 ಸದಾಕಾಲವೂ ನಮ್ಮ ಮೇಲೆ ಸಿಟ್ಟು ಮಾಡಿಕೊಳ್ಳುವೆಯಾ? ತಲತಲಾಂತರಗಳಿಗೂ ಕೋಪವನ್ನು ಬೆಳೆಸುವಿಯೋ?

6 ನಿನ್ನ ಪ್ರಜೆಯಾದ ನಾವು ನಿನ್ನಲ್ಲಿ ಆನಂದಿಸುವಂತೆ, ನೀನು ನಮ್ಮನ್ನು ಪುನಃ ಉಜ್ಜೀವಿಸುವುದಿಲ್ಲವೋ?

7 ಯೆಹೋವನೇ, ನಿನ್ನ ಕೃಪೆಯನ್ನು ನಮಗೆ ತೋರಿಸು; ನಿನ್ನ ರಕ್ಷಣೆಯನ್ನು ನಮಗೆ ಅನುಗ್ರಹಿಸು.

8 ಯೆಹೋವ ದೇವರು ಏನು ಹೇಳುತ್ತಾನೋ ಕೇಳುತ್ತೇನೆ. ಆತನು ತನ್ನ ಭಕ್ತಜನರಿಗೆ ಸಮಾಧಾನದ ವಾಕ್ಯವನ್ನು ಹೇಳುತ್ತಾನಲ್ಲಾ. ಅವರಾದರೋ ತಿರುಗಿ ಮೂರ್ಖತನದಲ್ಲಿ ಬೀಳದಿರಲಿ.

9 ಭಯಭಕ್ತಿಯುಳ್ಳ ಜನರಿಗೆ ಆತನ ರಕ್ಷಣೆಯು ಹತ್ತಿರವಿರುವುದು ಸತ್ಯ. ಇದರಿಂದ ಆತನ ಮಹಿಮೆ ನಮ್ಮ ದೇಶದಲ್ಲಿ ನೆಲೆಗೊಳ್ಳುವುದು.

10 ಆತನ ಶಾಶ್ವತ ಪ್ರೀತಿ ಮತ್ತು ನಂಬಿಗಸ್ತಿಕೆ ಒಂದನ್ನೊಂದು ಕೂಡಿರುವವು; ನೀತಿಯು, ಸಮಾಧಾನವು ಮುದ್ದಿಟ್ಟುಕೊಳ್ಳುವವು.

11 ಸತ್ಯತೆಯು ಭೂಮಿಯಿಂದ ಹುಟ್ಟುವುದು; ನೀತಿಯು ಆಕಾಶದಿಂದ ಕೆಳಗೆ ದೃಷ್ಟಿಸುವುದು.

12 ನಿಜವಾಗಿ ಯೆಹೋವನು ಒಳ್ಳೆಯದನ್ನು ಅನುಗ್ರಹಿಸುವನು; ನಮ್ಮ ದೇಶವು ತನ್ನ ಬೆಳೆ ಕೊಡುವುದು.

13 ನೀತಿಯು ಆತನ ಮುಂದೆ ಹೋಗುತ್ತಾ, ನಾವು ಆತನ ಹೆಜ್ಜೆಹಿಡಿದು ನಡೆಯುವಂತೆ ದಾರಿ ಮಾಡುವುದು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0