ಬೈಬಲ್ · Indian Revised Version (Kannada) 2019

ಕೀರ್ತನೆಗಳು 72

1 ದೇವರೇ, ಅರಸನಿಗೆ ನಿನ್ನ ನ್ಯಾಯವನ್ನು; ರಾಜಕುಮಾರನಿಗೆ ನಿನ್ನ ನೀತಿಯನ್ನು ಅನುಗ್ರಹಿಸು.

2 ಅವನು ನಿನ್ನ ಜನರಿಗೆ ನೀತಿಯಿಂದಲೂ, ಕುಗ್ಗಿಹೋದ ನಿನ್ನವರಿಗೆ ನ್ಯಾಯವಾಗಿಯೂ ತೀರ್ಪುಕೊಡಲಿ.

3 ಗುಡ್ಡ ದಿನ್ನೆಗಳೆಲ್ಲವು ನಿನ್ನ ಜನರಿಗೋಸ್ಕರ, ನೀತಿಗನುಸಾರವಾಗಿ ಸುಕ್ಷೇಮವನ್ನು ಫಲಿಸಲಿ.

4 ಅವನು ಬಡವರ ನ್ಯಾಯವನ್ನು ಸ್ಥಾಪಿಸಲಿ; ದೀನರ ಮಕ್ಕಳನ್ನು ಉದ್ಧರಿಸಲಿ; ಪ್ರಜಾಹಿಂಸಕರನ್ನು ಖಂಡಿಸಿಬಿಡಲಿ.

5 ಸೂರ್ಯನು, ಚಂದ್ರನು ಇರುವವರೆಗೂ, ತಲತಲಾಂತರಗಳವರೆಗೂ ಅವರು ನಿನಗೆ ಭಯಪಡಲಿ.

6 ಹುಲ್ಲುಕೊಯ್ದ ಮೇಹುಗಾಡಿನ ಮೇಲೆ ಸುರಿಯುವ ವೃಷ್ಟಿಯಂತೆಯೂ, ಭೂಮಿಯನ್ನು ನೆನಸುವ ಹದಮಳೆಯಂತೆಯೂ ಅವನು ಇರಲಿ.

7 ಅವನ ದಿನಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವವರೆಗೂ ಪರಿಪೂರ್ಣ ಸೌಭಾಗ್ಯವಿರಲಿ.

8 ಅವನು ಸಮುದ್ರದಿಂದ ಸಮುದ್ರದ ವರೆಗೂ, ಯೂಫ್ರೆಟಿಸ್ ನದಿಯಿಂದ ಭೂಮಿಯ ಕಟ್ಟಕಡೆಯವರೆಗೂ ಆಳಲಿ.

9 ಅರಣ್ಯವಾಸಿಗಳು ಅವನಿಗೆ ಅಡ್ಡಬೀಳಲಿ; ಅವನ ವೈರಿಗಳು ಮಣ್ಣುಮುಕ್ಕಲಿ.

10 ತಾರ್ಷೀಷ್ ಪ್ರಾಂತ್ಯದ ಮತ್ತು ಸಮುದ್ರದ ಕರಾವಳಿಯ ಅರಸರು ಕಪ್ಪಗಳನ್ನು ಸಲ್ಲಿಸಲಿ; ಶೆಬಾ ಮತ್ತು ಸೆಬಾ ಎಂಬ ಪ್ರದೇಶಗಳ ರಾಜರೂ ಕಾಣಿಕೆಗಳನ್ನು ತಂದೊಪ್ಪಿಸಲಿ.

11 ಎಲ್ಲಾ ಅರಸರೂ ಅವನಿಗೆ ಸಾಷ್ಟಾಂಗವೆರಗಲಿ; ಸರ್ವಜನಾಂಗಗಳು ಆತನನ್ನು ಸೇವಿಸಲಿ.

12 ಏಕೆಂದರೆ ಅವನು ಮೊರೆಯಿಡುವ ಬಡವರನ್ನೂ, ದಿಕ್ಕಿಲ್ಲದೆ ಕುಗ್ಗಿದವರನ್ನೂ ಉದ್ಧರಿಸುವನು.

13 ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು.

14 ಕುಯುಕ್ತಿ, ಬಲಾತ್ಕಾರಗಳಿಗೆ ತಪ್ಪಿಸಿ ಅವರ ಜೀವವನ್ನು ಕಾಯುವನು; ಅವರ ಜೀವವು ಅವನ ದೃಷ್ಟಿಯಲ್ಲಿ ಅಮೂಲ್ಯವಾಗಿರುವುದು.

15 ಅವನು ಬಾಳಲಿ; ಶೆಬಾ ಪ್ರಾಂತ್ಯದ ಬಂಗಾರವು ಅವನಿಗೆ ಸಮರ್ಪಣೆಯಾಗಲಿ. ಅವನಿಗೋಸ್ಕರ ಯಾವಾಗಲೂ ದೇವರಲ್ಲಿ ವಿಜ್ಞಾಪನೆಯು ನಡೆಯಲಿ; ದಿನದಿನವೂ ಅವನಿಗೆ ಆಶೀರ್ವಾದಗಳು ಉಂಟಾಗಲಿ.

16 ದೇಶದಲ್ಲಿ ಬೆಟ್ಟಗಳ ಮೇಲೆಲ್ಲಾ ಬೆಳೆಯು ಸಮೃದ್ಧಿಯಾಗಲಿ; ಪೈರುಗಳ ಶಬ್ದವು ಲೆಬನೋನಿನ ಮರಗಳ ಸಪ್ಪಳದಂತಿರಲಿ. ಹೊಲದಲ್ಲಿ ಕಾಯಿಪಲ್ಯದಂತೆ ಪಟ್ಟಣಗಳಲ್ಲಿ ಜನರು ಹೆಚ್ಚಲಿ.

17 ಅವನ ನಾಮವು ಸ್ಥಿರವಾಗಿರಲಿ; ಅವನ ಹೆಸರು ಸೂರ್ಯನಿರುವವರೆಗೆ ಇರಲಿ. ಎಲ್ಲಾ ಜನಾಂಗಗಳವರು ಅವನನ್ನು ಧನ್ಯನೆಂದು ಹೇಳಿ, ಅವನಿಗಿದ್ದ ಆಶೀರ್ವಾದವು ತಮಗೂ ಆಗಬೇಕೆಂದು ಕೋರುವವರಾಗಲಿ.

18 ಮಹತ್ಕಾರ್ಯಗಳನ್ನು ನಡೆಸುವುದರಲ್ಲಿ ಅದ್ವಿತೀಯನೂ, ಇಸ್ರಾಯೇಲರ ದೇವರಾದ ಯೆಹೋವನಿಗೆ ಸ್ತೋತ್ರವು.

19 ಆತನ ಪ್ರಭಾವವುಳ್ಳ ನಾಮಕ್ಕೆ ಸದಾಕಾಲಕ್ಕೂ ಸ್ತುತಿ ಇರಲಿ; ಭೂಮಂಡಲವೆಲ್ಲಾ ಆತನ ಪ್ರಭಾವದಿಂದ ತುಂಬಿರಲಿ. ಆಮೆನ್. ಆಮೆನ್.

20 ಇಲ್ಲಿಗೆ ಇಷಯನ ಮಗನಾದ ದಾವೀದನ ಪ್ರಾರ್ಥನೆಗಳ ಸಮಾಪ್ತಿ.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0