ಬೈಬಲ್ · Indian Revised Version (Kannada) 2019
ಕೀರ್ತನೆಗಳು 70
1 ದೇವರೇ, ದಯವಿಟ್ಟು ನನ್ನನ್ನು ರಕ್ಷಿಸು. ಯೆಹೋವನೇ, ಬೇಗನೆ ಬಂದು ಸಹಾಯ ಮಾಡು.
2 ನನ್ನ ಪ್ರಾಣಕ್ಕಾಗಿ ಸಮಯನೋಡುವವರು ಆಶಾಭಂಗಪಟ್ಟು ಅಪಮಾನಹೊಂದಲಿ; ನನ್ನ ಆಪತ್ತಿನಲ್ಲಿ ಸಂತೋಷಿಸುವವರು ಕಳವಳದಿಂದ ಹಿಂದಿರುಗಿ ಓಡಲಿ.
3 ಆಹಾ, ಆಹಾ ಎಂದು ಪರಿಹಾಸ್ಯಮಾಡುವವರು ತಮಗಾಗುವ ಅಪಮಾನದಿಂದ ಬೆನ್ನು ಕೊಟ್ಟು ಓಡಿಹೋಗಲಿ.
4 ನಿನ್ನ ದರ್ಶನವನ್ನು ಕೋರುವವರೆಲ್ಲರು ನಿನ್ನಲ್ಲಿ ಉಲ್ಲಾಸದಿಂದ ಸಂತೋಷಿಸಲಿ; ನಿನ್ನ ಜಯದಲ್ಲಿ ಆನಂದಿಸುವವರು, “ದೇವರು ಮಹೋನ್ನತನು” ಎಂದು ಯಾವಾಗಲೂ ಹೇಳಲಿ.
5 ನಾನಾದರೋ ಕುಗ್ಗಿದವನೂ, ದಿಕ್ಕಿಲ್ಲದವನೂ ಆಗಿದ್ದೇನೆ; ದೇವರೇ, ಬೇಗನೆ ಬಾ. ಯೆಹೋವನೇ, ನೀನೇ ನನಗೆ ಸಹಾಯಕನೂ, ರಕ್ಷಕನೂ ಆಗಿದ್ದೀ; ತಡಮಾಡಬೇಡ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0