ಬೈಬಲ್ · Indian Revised Version (Kannada) 2019
ಕೀರ್ತನೆಗಳು 20
1 ಇಕ್ಕಟ್ಟಿನಲ್ಲಿ ಯೆಹೋವನು ನಿನ್ನ ಪ್ರಾರ್ಥನೆಯನ್ನು ಕೇಳಲಿ; ಯಾಕೋಬನ ದೇವರ ನಾಮವು ನಿನ್ನನ್ನು ಉದ್ಧಾರ ಮಾಡಲಿ.
2 ಆತನು ತನ್ನ ಪರಿಶುದ್ಧ ನಿವಾಸದಿಂದ ನಿನಗೆ ಸಹಾಯಮಾಡಲಿ; ಚೀಯೋನಿನಿಂದ ನಿನಗೆ ಆಧಾರ ದಯಪಾಲಿಸಲಿ.
3 ನೀನು ಸಮರ್ಪಿಸಿದ ನೈವೇದ್ಯಗಳು ಆತನ ನೆನಪಿಗೆ ಬರಲಿ; ನೀನು ಮಾಡಿದ ಸರ್ವಾಂಗಹೋಮಗಳು ಆತನಿಗೆ ಮೆಚ್ಚಿಕೆಯಾಗಲಿ. ಸೆಲಾ
4 ಆತನು ನಿನ್ನ ಇಷ್ಟಾರ್ಥವನ್ನು ನೆರವೇರಿಸಲಿ; ನಿನ್ನ ಎಲ್ಲಾ ಸಂಕಲ್ಪಗಳನ್ನು ಸಫಲಮಾಡಲಿ.
5 ನಿನ್ನ ಜಯದಲ್ಲಿ ಉತ್ಸಾಹಧ್ವನಿ ಮಾಡುವೆವು; ನಮ್ಮ ದೇವರ ಹೆಸರಿನಲ್ಲಿ ಧ್ವಜ ಎತ್ತುವೆವು. ಯೆಹೋವನು ನಿನ್ನ ಎಲ್ಲಾ ವಿಜ್ಞಾಪನೆಗಳನ್ನು ನೆರವೇರಿಸಲಿ.
6 ಯೆಹೋವನು ತಾನು ಅಭಿಷೇಕಿಸಿದ ಅರಸನಿಗೆ ಜಯವನ್ನು ಅನುಗ್ರಹಿಸುವನೆಂದು ಈಗ ನನಗೆ ಗೊತ್ತಾಯಿತು. ಆತನು ತನ್ನ ಪವಿತ್ರ ಲೋಕದಿಂದ ಅವನ ಪ್ರಾರ್ಥನೆಗೆ ಸದುತ್ತರವನ್ನು ಕೊಡುವನು, ತನ್ನ ಭುಜಬಲದಿಂದ ಅವನಿಗೆ ವಿಜಯವನ್ನು ಉಂಟುಮಾಡುವನು.
7 ಕೆಲವರು ರಥಬಲದಲ್ಲಿ, ಕೆಲವರು ಅಶ್ವಬಲದಲ್ಲಿ ಹೆಚ್ಚಳಪಡುತ್ತಾರೆ; ನಾವಾದರೋ ನಮ್ಮ ದೇವರಾದ ಯೆಹೋವನಲ್ಲಿಯೇ ಹೆಚ್ಚಳಪಡುತ್ತೇವೆ.
8 ಅವರು ಬಿದ್ದುಹೋಗಿದ್ದಾರೆ; ನಾವಾದರೋ ಎದ್ದು ನಿಂತಿದ್ದೇವೆ.
9 ಯೆಹೋವನೇ, ನಮ್ಮ ಅರಸನಿಗೆ ಜಯವನ್ನುಂಟುಮಾಡು; ನಾವು ಮೊರೆಯಿಡುವಾಗ ಸದುತ್ತರವನ್ನು ದಯಪಾಲಿಸು.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0