ಬೈಬಲ್ · Indian Revised Version (Kannada) 2019

ಕೀರ್ತನೆಗಳು 135

1 ಯೆಹೋವನಿಗೆ ಸ್ತೋತ್ರ! ಯೆಹೋವನ ನಾಮವನ್ನು ಸ್ತುತಿಸಿರಿ. ಯೆಹೋವನ ಸೇವಕರೇ,

2 ಯೆಹೋವನ ಮಂದಿರದಲ್ಲಿಯೂ, ನಮ್ಮ ದೇವರ ಆಲಯದ ಅಂಗಳಗಳಲ್ಲಿಯೂ ಸೇವೆ ಮಾಡುವವರೇ, ಆತನನ್ನು ಕೀರ್ತಿಸಿರಿ.

3 ಯೆಹೋವನಿಗೆ ಸ್ತೋತ್ರ! ಯೆಹೋವನು ಒಳ್ಳೆಯವನು. ಆತನ ನಾಮವನ್ನು ಕೊಂಡಾಡಿರಿ; ಆತನು ಕೃಪಾಪೂರ್ಣನು.

4 ಯೆಹೋವನು ಯಾಕೋಬನ ವಂಶದವರನ್ನು ತನಗಾಗಿಯೂ, ಇಸ್ರಾಯೇಲರನ್ನು ಸ್ವಕೀಯ ಜನರನ್ನಾಗಿಯೂ ಆರಿಸಿಕೊಂಡನಲ್ಲಾ.

5 ಯೆಹೋವನು ದೊಡ್ಡವನೆಂದೂ, ನಮ್ಮ ಕರ್ತನು ಎಲ್ಲಾ ದೇವರುಗಳಿಗಿಂತ ಹೆಚ್ಚಿನವನೆಂದೂ ತಿಳಿದಿದ್ದೇನೆ.

6 ಯೆಹೋವನು ಭೂಮಿಯಲ್ಲಿಯೂ, ಆಕಾಶದಲ್ಲಿಯೂ, ಸಮುದ್ರಗಳಲ್ಲಿಯೂ, ಬೇರೆ ಎಲ್ಲಾ ಜಲರಾಶಿಗಳಲ್ಲಿಯೂ ತನಗೆ ಬೇಕಾದದ್ದನ್ನು ಮಾಡುತ್ತಾನೆ.

7 ಆತನು ಭೂಮಿಯ ಕಟ್ಟಕಡೆಯಿಂದ ಮೋಡಗಳನ್ನು ಮೇಲೇರುವಂತೆ ಮಾಡುತ್ತಾನೆ; ಮಳೆಗೋಸ್ಕರ ಮಿಂಚನ್ನು ಹೊಳೆಯುವಂತೆ ಮಾಡುತ್ತಾನೆ; ತನ್ನ ಉಗ್ರಾಣದಿಂದ ಗಾಳಿಯನ್ನು ಬೀಸುವಂತೆ ಮಾಡುತ್ತಾನೆ.

8 ಆತನು ಐಗುಪ್ತದ ಮನುಷ್ಯರು ಮೊದಲುಗೊಂಡು ಪಶುಗಳವರೆಗೂ, ಚೊಚ್ಚಲುಗಳನ್ನೆಲ್ಲಾ ಸಂಹರಿಸಿದನು.

9 ಐಗುಪ್ತವೇ, ಆತನು ನಿನ್ನ ಮಧ್ಯದಲ್ಲಿ ಫರೋಹನಿಗೂ, ಅವನ ಸೇವಕರಿಗೂ ವಿರುದ್ಧವಾಗಿ ಅದ್ಭುತಗಳನ್ನು, ಮಹತ್ಕಾರ್ಯಗಳನ್ನು ನಡೆಸಿದನು.

10 ಆತನು ದೊಡ್ಡ ಜನಾಂಗಗಳನ್ನು ನಾಶಮಾಡಿಬಿಟ್ಟನು; ಬಲಿಷ್ಠ ರಾಜರನ್ನು ಕೊಂದುಹಾಕಿದನು.

11 ಅವರಲ್ಲಿ ಅಮೋರಿಯರ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ಇದ್ದರು. ಆತನು ಕಾನಾನ್ ದೇಶದ ಎಲ್ಲಾ ರಾಜ್ಯಗಳನ್ನು ನಿರ್ಮೂಲ ಮಾಡಿದನು.

12 ಅವರ ದೇಶವನ್ನು ಇಸ್ರಾಯೇಲರಿಗೆ ಕೊಟ್ಟನು; ಆತನ ಪ್ರಜೆಗೆ ಅದು ಸ್ವಾಸ್ತ್ಯವಾಯಿತು.

13 ಯೆಹೋವನೇ, ನಿನ್ನ ನಾಮವು ಶಾಶ್ವತವಾದದ್ದು; ಯೆಹೋವನೇ, ನೀನು ತಲತಲಾಂತರಕ್ಕೂ ಸ್ಮರಿಸಲು ಯೋಗ್ಯನಾಗಿರುತ್ತೀ.

14 ನಿಜವಾಗಿ ಯೆಹೋವನು ತನ್ನ ಪ್ರಜೆಯ ನ್ಯಾಯವನ್ನು ಸ್ಥಾಪಿಸುವನು, ತನ್ನ ಸೇವಕರನ್ನು ಕನಿಕರಿಸುವನು.

15 ಅನ್ಯಜನಗಳ ವಿಗ್ರಹಗಳು ಬೆಳ್ಳಿ ಮತ್ತು ಬಂಗಾರದವುಗಳೇ; ಅವು ಮನುಷ್ಯರ ಕೈಕೆಲಸವಷ್ಟೇ.

16 ಅವುಗಳಿಗೆ ಬಾಯಿದ್ದರೂ ಮಾತನಾಡುವುದಿಲ್ಲ, ಕಣ್ಣಿದ್ದರೂ ನೋಡುವುದಿಲ್ಲ,

17 ಕಿವಿಯಿದ್ದರೂ ಕೇಳುವುದಿಲ್ಲ, ಇದಲ್ಲದೆ ಅವುಗಳ ಬಾಯಲ್ಲಿ ಶ್ವಾಸವೇ ಇಲ್ಲ.

18 ಅವುಗಳನ್ನು ಮಾಡುವವರು, ಅವುಗಳಲ್ಲಿ ಭರವಸವಿಡುವವರು ಅವುಗಳಂತೆಯೇ.

19 ಇಸ್ರಾಯೇಲನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಆರೋನನ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ.

20 ಲೇವಿಯ ಮನೆತನದವರೇ, ಯೆಹೋವನನ್ನು ಕೊಂಡಾಡಿರಿ; ಯೆಹೋವನ ಭಕ್ತರೇ, ಯೆಹೋವನನ್ನು ಕೊಂಡಾಡಿರಿ.

21 ಯೆರೂಸಲೇಮಿನಲ್ಲಿ ವಾಸಿಸುವ ಚೀಯೋನಿನ ದೇವರಿಗೆ, ಕೀರ್ತಿ ಉಂಟಾಗಲಿ, ಯೆಹೋವನಿಗೆ ಸ್ತೋತ್ರ!

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0