ಬೈಬಲ್ · Indian Revised Version (Kannada) 2019

ಕೀರ್ತನೆಗಳು 76

1 ದೇವರು ಯೆಹೂದ ದೇಶದಲ್ಲಿ ಪ್ರಸಿದ್ಧಗೊಂಡವನು; ಇಸ್ರಾಯೇಲರಲ್ಲಿ ಆತನ ನಾಮವು ದೊಡ್ಡದು.

2 ಸಾಲೇಮಿನಲ್ಲಿ ಆತನ ಬಿಡಾರವಿದೆ; ಚೀಯೋನಿನಲ್ಲಿ ಆತನು ವಾಸಿಸುತ್ತಾನೆ.

3 ಅಲ್ಲಿ ಆತನು ಮಿಂಚಿನಂತೆ ಹಾರಿ ಬರುವ ಬಾಣಗಳನ್ನೂ, ಗುರಾಣಿ, ಖಡ್ಗ ಮುಂತಾದ ಯುದ್ಧ ಆಯುಧಗಳನ್ನೂ ಮುರಿದುಬಿಟ್ಟಿದ್ದಾನೆ. ಸೆಲಾ

4 ನೀನು ತೇಜೋಮಯನು; ಕೊಳ್ಳೆಹೊಡೆದ ಬೆಟ್ಟಗಳಿಗಿಂತ ಘನ ಗಾಂಭೀರ್ಯಯುಳ್ಳವನು.

5 ಧೀರಹೃದಯರು ಸುಲಿಗೆಯಾಗಿ ದೀರ್ಘನಿದ್ರೆ ಮಾಡಿದ್ದಾರೆ; ಎಲ್ಲಾ ಶೂರರ ಕೈಗಳು ಬಿದ್ದುಹೋದವು.

6 ಯಾಕೋಬ ವಂಶದವರ ದೇವರೇ, ನಿನ್ನ ಗದರಿಕೆಯಿಂದ ರಥಬಲವೂ, ಅಶ್ವಬಲವೂ ಮೈಮರೆತು ಹೋದವು.

7 ನೀನು ಮಹಾಶಕ್ತಿಶಾಲಿ; ನೀನು ಸಿಟ್ಟುಗೊಂಡಾಗ ನಿನ್ನ ಮುಂದೆ ಯಾರು ನಿಂತಾರು?

8 ಪರಲೋಕದಲ್ಲಿರುವ ನೀನು ನಿನ್ನ ನ್ಯಾಯವಿಧಿಯನ್ನು ಆಜ್ಞಾಪಿಸುವಾಗ,

9 ದೇವರು ಲೋಕದ ದೀನರನ್ನು ರಕ್ಷಿಸಿ, ನ್ಯಾಯವನ್ನು ಸ್ಥಾಪಿಸುವುದಕ್ಕೋಸ್ಕರ ಎದ್ದು ಬಂದಿದ್ದಾನೆಂದು ಭೂನಿವಾಸಿಗಳು ಭಯದಿಂದ ಸ್ತಬ್ಧರಾದರು. ಸೆಲಾ

10 ಮನುಷ್ಯರ ಮೇಲಿನ ಕೋಪವೂ ನಿನ್ನ ಘನತೆಗೆ ಸಾಧನವಾಗುವುದು; ಕೋಪಶೇಷವನ್ನು ನಡುಕಟ್ಟಿನಂತೆ ಬಿಗಿದುಕೊಳ್ಳುವಿ.

11 ನಿಮ್ಮ ದೇವನಾದ ಯೆಹೋವನಿಗೆ ಹರಕೆಮಾಡಿ ಸಲ್ಲಿಸಿರಿ; ಅವನ ಸುತ್ತಲಿರುವ ಜನರು ಮಹಾಮಹಿಮನಿಗೆ ಕಾಣಿಕೆಗಳನ್ನು ಸಮರ್ಪಿಸಲಿ.

12 ಆತನು ಭೂಪತಿಗಳಿಗೆ ಭಯಪ್ರದರಾಗಿದ್ದ ಪ್ರಭುಗಳ ಅಹಂಭಾವವನ್ನು ಮುರಿದುಬಿಡುವನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0