ಬೈಬಲ್ · Indian Revised Version (Kannada) 2019

ಕೀರ್ತನೆಗಳು 62

1 ನನ್ನ ಮನಸ್ಸು ದೇವರನ್ನೇ ನಂಬಿ ಶಾಂತವಾಗಿರುವುದು. ನನ್ನ ರಕ್ಷಣೆಯು ಆತನಿಂದಲೇ.

2 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲಿದರೂ ಬೀಳೆನು.

3 ನೀವೆಲ್ಲರೂ ಒಬ್ಬ ಪುರುಷನ ಮೇಲೆ ಬಿದ್ದು, ಅವನು ಬಾಗಿದ ಗೋಡೆಯ ಹಾಗೆ ಮತ್ತು ಕುಸಿದ ಪ್ರಾಕಾರವೋ ಎಂಬಂತೆ ಅವನನ್ನು ಹೊಡೆದು ಕೆಡವಬೇಕೆಂದಿರುವುದು ಇನ್ನೆಷ್ಟರವರೆಗೆ?

4 ಅವನನ್ನು ಉನ್ನತಸ್ಥಾನದಿಂದ ದೊಬ್ಬುವುದೇ ಅವರ ಆಲೋಚನೆ. ಸುಳ್ಳಾಡುವುದು ಅವರಿಗೆ ಅತಿಸಂತೋಷ; ಬಾಯಿಂದ ಹರಸಿ ಮನಸ್ಸಿನಿಂದ ಶಪಿಸುತ್ತಾರೆ. ಸೆಲಾ

5 ನನ್ನ ಮನವೇ, ದೇವರನ್ನೇ ನಂಬಿ ಶಾಂತವಾಗಿರು. ನನ್ನ ನಿರೀಕ್ಷೆಯು ನೆರವೇರುವುದು ಆತನಿಂದಲೇ.

6 ಆತನೇ ನನಗೆ ಶರಣನೂ, ರಕ್ಷಕನೂ ಮತ್ತು ದುರ್ಗವೂ; ನಾನು ಕದಲುವುದಿಲ್ಲ.

7 ನನ್ನ ರಕ್ಷಣೆಗೂ, ಮಾನಕ್ಕೂ ದೇವರೇ ಆಧಾರ; ನನಗೆ ಬಲವಾದ ದುರ್ಗವೂ, ಆಶ್ರಯವೂ ದೇವರಲ್ಲಿಯೇ.

8 ಜನರೇ, ಯಾವಾಗಲೂ ಆತನನ್ನೇ ನಂಬಿ, ನಿಮ್ಮ ಹೃದಯವನ್ನು ಆತನ ಮುಂದೆ ತೆರೆಯಿರಿ; ದೇವರು ನಮ್ಮ ಆಶ್ರಯವು. ಸೆಲಾ

9 ನರರು ಬರೀ ಉಸಿರೇ; ನರಾಧಿಪತಿಗಳು ಬರೀ ಮಾಯವೇ. ಅವರೆಲ್ಲರನ್ನು ತ್ರಾಸಿನಲ್ಲಿ ತೂಗಿ ನೋಡಿದರೆ ಉಸಿರಿಗಿಂತಲೂ ಹಗುರ.

10 ಅನ್ಯಾಯದಿಂದ ಸಂಪಾದಿಸಿದ್ದನ್ನು ನೆಚ್ಚಬೇಡಿರಿ; ಸುಲಿಗೆಯಿಂದ ಗಳಿಸಿ ಅಹಂಕಾರಪಡಬೇಡಿರಿ; ಹೆಚ್ಚಿದ ಆಸ್ತಿಯಲ್ಲಿ ಮನಸ್ಸಿಡಬೇಡಿರಿ.

11 ಸರ್ವಾಧಿಕಾರವು ದೇವರದೇ ಎಂದು ದೇವರು ಒಮ್ಮೆ ಅಲ್ಲ, ಎರಡಾವರ್ತಿ ಹೇಳಿದ್ದನ್ನು ಕೇಳಿದ್ದೇನೆ.

12 ಕರ್ತನೇ, ನೀನು ಪ್ರೀತಿಸ್ವರೂಪನಾಗಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಪ್ರತಿಫಲವನ್ನು ಕೊಡುವಂಥವನಲ್ಲವೇ.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0