ಬೈಬಲ್ · Indian Revised Version (Kannada) 2019
ಕೀರ್ತನೆಗಳು 46
1 ದೇವರು ನಮಗೆ ಆಶ್ರಯದುರ್ಗವಾಗಿದ್ದಾನೆ; ಆತನು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು.
2 ಆದುದರಿಂದ ಭೂಮಿಯು ಮಾರ್ಪಟ್ಟರೂ, ಬೆಟ್ಟಗಳು ಸಮುದ್ರದಲ್ಲಿ ಮುಳುಗಿಹೋದರೂ, ನಮಗೇನೂ ಭಯವಿಲ್ಲ.
3 ಸಮುದ್ರವು ಬೋರ್ಗರೆಯುತ್ತಾ ನೊರೆಯನ್ನು ಕಾರಿದರೇನು? ಅದರ ಅಲ್ಲಕಲ್ಲೋಲಗಳಿಂದ ಪರ್ವತಗಳು ಚಲಿಸಿದರು ಭಯವಿಲ್ಲ? ಸೆಲಾ
4 ಒಂದು ನದಿ ಇದೆ; ಅದರ ಕಾಲುವೆಗಳು, ಪರಾತ್ಪರನಾದ ದೇವರ ಪರಿಶುದ್ಧ ನಿವಾಸಸ್ಥಾನವಾಗಿರುವ, ದೇವರ ನಗರವನ್ನು ಸಂತೋಷಪಡಿಸುತ್ತವೆ.
5 ದೇವರು ಇದರಲ್ಲಿದ್ದಾನೆ; ಇದಕ್ಕೆ ಚಲನವೇ ಇಲ್ಲ. ಉದಯಕಾಲದಲ್ಲಿಯೇ ದೇವರು ಇದರ ಸಹಾಯಕ್ಕೆ ಬರುವನು.
6 ಜನಾಂಗಗಳು ಕಳವಳಗೊಂಡವು; ರಾಜ್ಯಗಳು ತತ್ತರಿಸಿದವು. ಆತನು ಗರ್ಜಿಸಲು ಭೂಲೋಕವೆಲ್ಲಾ ಕರಗಿ ಹೋಯಿತು.
7 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬ ವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ
8 ಬನ್ನಿರಿ, ಯೆಹೋವನ ಕಾರ್ಯವನ್ನು ನೋಡಿರಿ; ಆತನು ಭೂಲೋಕದಲ್ಲಿ ಎಂಥಾ ವಿನಾಶವನ್ನು ಉಂಟುಮಾಡಿದ್ದಾನೆ.
9 ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ಸ್ಥಗಿತಗೊಳಿಸಿದ್ದಾನೆ; ಬಿಲ್ಲುಗಳನ್ನೂ, ಭಲ್ಲೆಯಗಳನ್ನೂ ಮುರಿದುಹಾಕಿದ್ದಾನೆ; ರಥಗಳನ್ನು ದಹಿಸಿಬಿಟ್ಟಿದ್ದಾನೆ.
10 “ಕಾದಾಡುವುದನ್ನು ನಿಲ್ಲಿಸಿರಿ, ನಾನೇ ದೇವರು; ಲೋಕದ ಸಮಸ್ತ ಜನಗಳಿಗೂ ಸರ್ವಾಧಿಪತಿಯು ನಾನೇ ಎಂದು ತಿಳಿಯಿರಿ” ಎಂದು ಹೇಳಿದ್ದಾನೆ.
11 ಸೇನಾಧೀಶ್ವರನಾದ ಯೆಹೋವನು ನಮ್ಮ ಸಂಗಡ ಇದ್ದಾನೆ; ಯಾಕೋಬವಂಶದವರ ದೇವರು ನಮಗೆ ಆಶ್ರಯ ದುರ್ಗವಾಗಿದ್ದಾನೆ. ಸೆಲಾ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0