ಬೈಬಲ್ · Indian Revised Version (Kannada) 2019

ಕೀರ್ತನೆಗಳು 23

1 ಯೆಹೋವನು ನನಗೆ ಕುರುಬನು; ಕೊರತೆಪಡೆನು.

2 ಆತನು ಹಸಿರುಗಾವಲುಗಳಲ್ಲಿ ನನ್ನನ್ನು ತಂಗಿಸುತ್ತಾನೆ; ವಿಶ್ರಾಂತಿಕರವಾದ ನೀರುಗಳ ಬಳಿಗೆ ಬರಮಾಡುತ್ತಾನೆ.

3 ನನ್ನ ಪ್ರಾಣವನ್ನು ಉಜ್ಜೀವಿಸಮಾಡಿ ತನ್ನ ಹೆಸರಿಗೆ ತಕ್ಕಂತೆ ನೀತಿಯ ಮಾರ್ಗದಲ್ಲಿ ನನ್ನನ್ನು ನಡೆಸುತ್ತಾನೆ.

4 ನಾನು ಕಾರ್ಗತ್ತಲಿನ ಕಣಿವೆಯಲ್ಲಿ ನಡೆಯುವಾಗಲೂ, ನೀನು ಹತ್ತಿರವಿರುವುದರಿಂದ ಕೇಡಿಗೆ ಹೆದರೆನು; ನಿನ್ನ ದೊಣ್ಣೆಯೂ ಮತ್ತು ನಿನ್ನ ಕೋಲೂ ನನಗೆ ಧೈರ್ಯ ಕೊಡುತ್ತವೆ.

5 ವೈರಿಗಳ ಮುಂದೆಯೇ ನೀನು ನನಗೋಸ್ಕರ ಔತಣವನ್ನು ಸಿದ್ಧಪಡಿಸುತ್ತೀ; ನನ್ನ ತಲೆಗೆ ತೈಲವನ್ನು ಹಚ್ಚಿಸುತ್ತೀ, ನನ್ನ ಪಾತ್ರೆಯು ತುಂಬಿ ಹೊರಸೂಸುತ್ತದೆ.

6 ನಿಶ್ಚಯವಾಗಿ ನನ್ನ ಜೀವಮಾನದಲ್ಲೆಲ್ಲಾ ಶುಭವೂ ಮತ್ತು ಕೃಪೆಯೂ ನನ್ನನ್ನು ಹಿಂಬಾಲಿಸುವವು. ನಾನು ಸದಾಕಾಲವೂ ಯೆಹೋವನ ಮಂದಿರದಲ್ಲಿ ವಾಸಿಸುವೆನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0