ಬೈಬಲ್ · Indian Revised Version (Kannada) 2019
ಕೀರ್ತನೆಗಳು 16
1 ದೇವರೇ, ನಾನು ನಿನ್ನ ಶರಣಾಗತನು; ನನ್ನನ್ನು ಕಾಪಾಡು.
2 ನಾನು ಯೆಹೋವನನ್ನು ಕುರಿತು, “ನೀನೇ ನನ್ನ ಒಡೆಯನು; ನನ್ನ ಸುಖವು ನಿನ್ನಲ್ಲಿಯೇ ಹೊರತು ಬೇರೆ ಇಲ್ಲ” ಎಂದು ಹೇಳುವೆನು.
3 ಭೂಲೋಕದಲ್ಲಿರುವ ದೇವಜನರ ವಿಷಯದಲ್ಲಿ, “ಇವರೇ ಶ್ರೇಷ್ಠರು, ಇವರೇ ನನಗೆ ಇಷ್ಟರಾದವರು” ಎಂದು ಹೇಳುವೆನು.
4 ಇತರ ದೇವರುಗಳನ್ನು ಅವಲಂಬಿಸಿದವರಿಗೆ ಬಹಳ ಕಷ್ಟನಷ್ಟಗಳು ಉಂಟಾಗುವವು. ಅವರಂತೆ ನಾನು ರಕ್ತವನ್ನು ಪಾನದ್ರವ್ಯವಾಗಿ ಸಮರ್ಪಿಸುವುದೇ ಇಲ್ಲ; ಅವರ ನಾಮಗಳನ್ನಾದರೂ ಉಚ್ಚರಿಸುವುದಿಲ್ಲ.
5 ನನ್ನ ಪಾಲೂ, ನನ್ನ ಪಾನವೂ ಯೆಹೋವನೇ, ನೀನೇ ನನ್ನ ಸ್ವತ್ತನ್ನು ಭದ್ರಗೊಳಿಸುತ್ತೀ.
6 ನನಗೆ ಪ್ರಾಪ್ತವಾಗಿರುವ ಸ್ವತ್ತು ರಮಣೀಯವಾದದ್ದು; ಅದು ನನಗೆ ಸಂತೃಪ್ತಿಕರವಾಗಿದೆ.
7 ಯೆಹೋವನು ನನಗೆ ಆಲೋಚನೆಯನ್ನು ಹೇಳಿಕೊಡುತ್ತಾನೆ; ನಾನು ಆತನನ್ನು ಕೊಂಡಾಡುವೆನು. ರಾತ್ರಿಯ ಸಮಯಗಳಲ್ಲಿ ನನ್ನ ಅಂತರಾತ್ಮವು ನನ್ನನ್ನು ಬೋಧಿಸುತ್ತದೆ.
8 ನಾನು ಯೆಹೋವನನ್ನು ಯಾವಾಗಲೂ ನನ್ನೆದುರಿನಲ್ಲಿಯೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವುದರಿಂದ ನಾನು ಎಂದಿಗೂ ಕದಲುವುದಿಲ್ಲ.
9 ಆದಕಾರಣ ನನ್ನ ಹೃದಯವು ಹರ್ಷಿಸುತ್ತದೆ; ನನ್ನ ಮನವು ಉಲ್ಲಾಸಗೊಳ್ಳುತ್ತದೆ; ನನ್ನ ಶರೀರವೂ ಸುರಕ್ಷಿತವಾಗಿರುವುದು.
10 ಏಕೆಂದರೆ ನೀನು ನನ್ನ ಜೀವಾತ್ಮವನ್ನು ಪಾತಾಳದಲ್ಲಿ ಬಿಡುವುದಿಲ್ಲ; ನಿನ್ನ ಭಕ್ತನಿಗೆ ಅಧೋಲೋಕವನ್ನು ನೋಡಗೊಡಿಸುವುದಿಲ್ಲ.
11 ನೀನು ನನಗೆ ಜೀವಮಾರ್ಗವನ್ನು ತಿಳಿಯಪಡಿಸುವಿ; ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷವಿದೆ; ನಿನ್ನ ಬಲಗೈಯಲ್ಲಿ ಶಾಶ್ವತ ಭಾಗ್ಯವಿದೆ.
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0