ಬೈಬಲ್ · Indian Revised Version (Kannada) 2019

ಕೀರ್ತನೆಗಳು 146

1 ಯೆಹೋವನಿಗೆ ಸ್ತೋತ್ರ! ನನ್ನ ಮನವೇ, ಯೆಹೋವನನ್ನು ಸ್ತುತಿಸು.

2 ಪ್ರಾಣವಿರುವವರೆಗೂ ಯೆಹೋವನನ್ನು ಸ್ತುತಿಸುವೆನು, ಜೀವಮಾನವೆಲ್ಲಾ ನನ್ನ ದೇವರನ್ನು ಕೊಂಡಾಡುವೆನು.

3 ಪ್ರಭುಗಳಲ್ಲಾಗಲಿ, ಮನುಷ್ಯರಲ್ಲಾಗಲಿ ಭರವಸವಿಡಬೇಡಿರಿ, ಅವರು ಸಹಾಯ ಮಾಡ ಶಕ್ತರಲ್ಲ,

4 ಉಸಿರು ಹೋಗಲು ಅವರು ಮಣ್ಣಿಗೆ ಸೇರುತ್ತಾರೆ, ಅವರ ಸಂಕಲ್ಪಗಳೆಲ್ಲಾ ಅದೇ ದಿನದಲ್ಲಿ ಹಾಳಾಗುವುದು.

5 ಯಾರಿಗೆ ಯಾಕೋಬನ ದೇವರು ಸಹಾಯಕನೋ, ಯಾರು ತನ್ನ ದೇವರಾದ ಯೆಹೋವನನ್ನು ನಂಬಿರುತ್ತಾನೋ, ಅವನೇ ಧನ್ಯನು.

6 ಭೂಮಿ, ಆಕಾಶ, ಸಾಗರ, ಜಲಚರ ಇವುಗಳನ್ನು ನಿರ್ಮಿಸಿದವನೂ, ವಾಗ್ದಾನವನ್ನು ಯಾವಾಗಲೂ ನೆರವೇರಿಸುವವನೂ,

7 ಹಿಂಸೆಗೆ ಗುರಿಯಾದವರ ನ್ಯಾಯವನ್ನು ಸ್ಥಾಪಿಸುವವನೂ, ಹಸಿದವರಿಗೆ ಆಹಾರ ಕೊಡುವವನೂ ಆತನೇ. ಯೆಹೋವನು ಸೆರೆಯಲ್ಲಿರುವವರನ್ನು ಬಿಡಿಸುತ್ತಾನೆ.

8 ಯೆಹೋವನು ಕುರುಡರಿಗೆ ಕಣ್ಣು ಕೊಡುತ್ತಾನೆ. ಯೆಹೋವನು ಕುಗ್ಗಿದವರನ್ನು ಉದ್ಧರಿಸುತ್ತಾನೆ. ಯೆಹೋವನು ನೀತಿವಂತರನ್ನು ಪ್ರೀತಿಸುತ್ತಾನೆ.

9 ಯೆಹೋವನು ಪರದೇಶದವರನ್ನು ಕಾಪಾಡುತ್ತಾನೆ. ಆತನು ಅನಾಥರಿಗೂ, ವಿಧವೆಯರಿಗೂ ಆಧಾರವಾಗಿದ್ದಾನೆ. ಆದರೆ ದುಷ್ಟರ ಮಾರ್ಗವನ್ನು ಡೊಂಕು ಮಾಡುತ್ತಾನೆ.

10 ಯೆಹೋವನು ಸದಾಕಾಲವೂ ಅರಸನಾಗಿರುವನು, ಚೀಯೋನೇ, ನಿನ್ನ ದೇವರು ತಲತಲಾಂತರಕ್ಕೂ ಆಳುವನು, ಯೆಹೋವನಿಗೆ ಸ್ತೋತ್ರ!

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0