ಬೈಬಲ್ · Indian Revised Version (Kannada) 2019

ಕೀರ್ತನೆಗಳು 143

1 ಯೆಹೋವನೇ, ನನ್ನ ಪ್ರಾರ್ಥನೆಯನ್ನು ಆಲಿಸು; ನನ್ನ ಬಿನ್ನಹಕ್ಕೆ ಕಿವಿಗೊಡು; ನಿನ್ನ ನೀತಿ ಸತ್ಯತೆಗಳಿಗೆ ಅನುಸಾರವಾಗಿ ಸದುತ್ತರವನ್ನು ದಯಪಾಲಿಸು.

2 ನಿನ್ನ ಸೇವಕನನ್ನು ವಿಚಾರಣೆಗೆ ಗುರಿಮಾಡಬೇಡ; ನಿನ್ನ ಸನ್ನಿಧಿಯಲ್ಲಿ ಯಾವ ಜೀವಿಯೂ ನೀತಿವಂತನಲ್ಲ.

3 ವೈರಿಯು ನನ್ನ ಪ್ರಾಣವನ್ನು ಹಿಂಸಿಸಿದ್ದಾನೆ; ಜೀವವನ್ನು ನೆಲಕ್ಕೆ ಹಾಕಿ ಜಜ್ಜಿದ್ದಾನೆ. ಕಾರ್ಗತ್ತಲೆಯಲ್ಲಿ ನನ್ನನ್ನು ಹಾಕಿದ್ದಾನೆ; ಬಹು ಕಾಲದಿಂದ ಸತ್ತವರಂತಿದ್ದೇನೆ.

4 ನನ್ನ ಆತ್ಮವು ಕುಂದಿಹೋಗಿದೆ; ನನ್ನ ಮನಸ್ಸು ಬೆರಗಾಗಿದೆ.

5 ಹಳೆಯ ದಿನಗಳನ್ನು ನೆನಪುಮಾಡಿಕೊಳ್ಳುತ್ತೇನೆ; ನಿನ್ನ ಎಲ್ಲಾ ಕಾರ್ಯಗಳನ್ನು ಧ್ಯಾನಿಸುತ್ತೇನೆ; ನಿನ್ನ ಕೈಕೆಲಸಗಳನ್ನು ಸ್ಮರಿಸುತ್ತೇನೆ;

6 ಕೈಚಾಚಿ ಬೇಡುತ್ತೇನೆ; ಒಣನೆಲವು ನೀರಿಗಾಗಿ ಹೇಗೋ, ಹಾಗೆಯೇ ನನ್ನ ಆತ್ಮವು ನಿನಗಾಗಿ ತವಕಪಡುತ್ತದೆ. ಸೆಲಾ

7 ಯೆಹೋವನೇ, ಬೇಗನೆ ಸದುತ್ತರವನ್ನು ದಯಪಾಲಿಸು; ನನ್ನ ಆತ್ಮವು ಕುಂದಿಹೋಗಿದೆ. ನೀನು ವಿಮುಖನಾದರೆ ಸಮಾಧಿಯಲ್ಲಿ ಸೇರಿದವರಿಗೆ ನಾನು ಸಮಾನನಾಗಿರುವೆನು.

8 ಹೊತ್ತಾರೆ ನಿನ್ನ ಕೃಪೆಯು ನನಗೆ ಪ್ರಕಟವಾಗಲಿ; ನಿನ್ನಲ್ಲಿ ಭರವಸವಿಟ್ಟಿದ್ದೇನಲ್ಲಾ. ನಾನು ನಡೆಯತಕ್ಕ ಮಾರ್ಗವನ್ನು ತಿಳಿಸು; ನನ್ನ ಮನಸ್ಸನ್ನು ನಿನ್ನಲ್ಲಿಯೇ ಇಟ್ಟಿದ್ದೇನೆ.

9 ಯೆಹೋವನೇ, ನಿನ್ನನ್ನೇ ಮೊರೆಹೊಕ್ಕಿದ್ದೇನೆ; ಶತ್ರುಗಳಿಂದ ನನ್ನನ್ನು ಬಿಡಿಸು.

10 ನಿನ್ನ ಚಿತ್ತದಂತೆ ನಡೆಯಲು ನನಗೆ ಕಲಿಸು, ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಸಮದಾರಿಯಲ್ಲಿ ನಡೆಸಲಿ.

11 ಯೆಹೋವನೇ, ನಿನ್ನ ಹೆಸರಿನ ನಿಮಿತ್ತ ನನ್ನನ್ನು ಉಜ್ಜೀವಿಸಮಾಡು; ನಿನ್ನ ನೀತಿಗನುಸಾರವಾಗಿ ನನ್ನ ಪ್ರಾಣವನ್ನು ವಿಪತ್ತಿನಿಂದ ಬಿಡಿಸು.

12 ನನಗೆ ಕೃಪೆತೋರಿಸಿ ನನ್ನ ವೈರಿಗಳನ್ನು ಖಂಡಿಸಿಬಿಡು. ನನ್ನ ಪ್ರಾಣಕಂಟಕರನ್ನೆಲ್ಲಾ ಕಡಿದುಹಾಕು; ನಾನು ನಿನ್ನ ಸೇವಕನಲ್ಲವೇ.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0