ಬೈಬಲ್ · Indian Revised Version (Kannada) 2019

ಕೀರ್ತನೆಗಳು 141

1 ಯೆಹೋವನೇ, ಮೊರೆಯಿಡುತ್ತೇನೆ, ಬೇಗನೆ ಬಾ, ನಾನು ಮೊರೆಯಿಡುವಾಗ ನನ್ನ ಕೂಗನ್ನು ಲಾಲಿಸು.

2 ನನ್ನ ಪ್ರಾರ್ಥನೆಯು ಧೂಪದಂತೆಯೂ, ನಾನು ಕೈಯೆತ್ತುವುದು ಸಂಧ್ಯಾನೈವೇದ್ಯದಂತೆಯೂ ನಿನಗೆ ಸಮರ್ಪಕವಾಗಲಿ.

3 ಯೆಹೋವನೇ, ನನ್ನ ಬಾಯಿಗೆ ಕಾವಲಿರಿಸು, ನನ್ನ ತುಟಿಗಳೆಂಬ ಕದವನ್ನು ಕಾಯಿ.

4 ನನ್ನ ಹೃದಯವು ದುರಾಚಾರವನ್ನು ಮೆಚ್ಚದಂತೆಯೂ, ನಾನು ದುಷ್ಟರೊಡನೆ ಸೇರಿ ಕೆಟ್ಟ ಕೆಲಸಗಳನ್ನು ನಡೆಸದಂತೆಯೂ ನನ್ನನ್ನು ಕಾಪಾಡು. ಅವರ ಮೃಷ್ಟಾನ್ನವು ನನಗೆ ಬೇಡವೇ ಬೇಡ.

5 ನೀತಿವಂತರು ನನ್ನನ್ನು ಹೊಡೆಯಲಿ, ಅದು ನನಗೆ ಉಪಕಾರ, ಅವರು ನನ್ನನ್ನು ಶಿಕ್ಷಿಸಲಿ, ಅದು ನನ್ನ ತಲೆಗೆ ಎಣ್ಣೆಯಂತಿದೆ, ನನ್ನ ತಲೆಯು ಅದನ್ನು ಬೇಡವೆನ್ನದಿರಲಿ. ಆದರೆ ದುಷ್ಟರ ಕೆಟ್ಟತನಕ್ಕೆ ವಿರುದ್ಧವಾಗಿ ದೇವರನ್ನು ಪ್ರಾರ್ಥಿಸುತ್ತಿರುವೆನು.

6 ಅವರ ಪ್ರಮುಖರು ಕಡುಬಂಡೆಯಿಂದ ಕೆಳಕ್ಕೆ ದೊಬ್ಬಲ್ಪಟ್ಟ ಮೇಲೆ, ಜನರು ನನ್ನ ಮಾತುಗಳಿಗೆ ಕಿವಿಗೊಡುವರು, ಅವು ಅವರಿಗೆ ಹಿತವಾಗಿರುವವು.

7 ಒಬ್ಬನು ಹೊಲವನ್ನು ಉಳುತ್ತಾ, ಹೆಂಟೆಗಳನ್ನು ಒಡೆದು ಚದರಿಸುವ ಪ್ರಕಾರವೇ, ನಮ್ಮ ಎಲುಬುಗಳು ಪಾತಾಳದ್ವಾರದಲ್ಲಿ ಚದರಿಸಲ್ಪಟ್ಟಿರುತ್ತವೆ.

8 ಕರ್ತನೇ, ಯೆಹೋವನೇ, ನನ್ನ ದೃಷ್ಟಿ ನಿನ್ನಲ್ಲಿದೆ, ನಿನ್ನನ್ನು ಆಶ್ರಯಿಸಿಕೊಂಡಿದ್ದೇನೆ, ನನ್ನ ಪ್ರಾಣವನ್ನು ಮರಣಕ್ಕೆ ಒಪ್ಪಿಸಬೇಡ.

9 ಕೆಡುಕರ ಉರುಲಿನಲ್ಲಿ ಸಿಕ್ಕಿಬೀಳದಂತೆ ನನ್ನನ್ನು ಕಾಪಾಡು, ಅವರು ಬೀಸಿಟ್ಟಿರುವ ಬಲೆಯಿಂದ ನನ್ನನ್ನು ತಪ್ಪಿಸು.

10 ದುಷ್ಟರು ತಮ್ಮ ಬಲೆಯಲ್ಲಿ ತಾವೇ ಬಿದ್ದುಹೋಗಲಿ, ಆಗ ನಾನು ತಪ್ಪಿಸಿಕೊಳ್ಳುವೆನು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0