ಬೈಬಲ್ · Indian Revised Version (Kannada) 2019

ಕೀರ್ತನೆಗಳು 1

1 ಯಾರು ದುಷ್ಟರ ಆಲೋಚನೆಯಂತೆ ನಡೆಯದೆ, ಪಾಪಾತ್ಮರ ಮಾರ್ಗದಲ್ಲಿ ನಿಂತುಕೊಳ್ಳದೆ, ಧರ್ಮನಿಂದಕರೊಡನೆ ಕುಳಿತುಕೊಳ್ಳದೆ,

2 ಯೆಹೋವನ ಧರ್ಮಶಾಸ್ತ್ರದಲ್ಲಿ ಸಂತೋಷಿಸುತ್ತಾ, ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವವನು ಎಷ್ಟೋ ಧನ್ಯನು.

3 ನೀರಿನ ಕಾಲುವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗೆ ಅವನಿರುವನು. ಅಂಥ ಮರವು ಸೂಕ್ತಕಾಲದಲ್ಲಿ ಫಲಕೊಡುತ್ತದಲ್ಲಾ. ಅದರ ಎಲೆ ಬಾಡುವುದೇ ಇಲ್ಲ. ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವುದು.

4 ದುಷ್ಟರೋ ಹಾಗಲ್ಲ; ಅವರು ಗಾಳಿ ಬಡಿದುಕೊಂಡು ಹೋಗುವ ಹೊಟ್ಟಿನಂತೆ ಇದ್ದಾರೆ.

5 ಆದುದರಿಂದ ದುಷ್ಟರು ನ್ಯಾಯವಿಚಾರಣೆಯಲ್ಲಿಯೂ, ಪಾಪಾತ್ಮರು ನೀತಿವಂತರ ಸಭೆಯಲ್ಲಿಯೂ ನಿಲ್ಲುವುದಿಲ್ಲ.

6 ಯೆಹೋವನು ನೀತಿವಂತರ ಮಾರ್ಗವನ್ನು ಲಕ್ಷಿಸುವನು; ದುಷ್ಟರ ಮಾರ್ಗವೋ ನಾಶವಾಗುವುದು.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0