ಬೈಬಲ್ · Indian Revised Version (Kannada) 2019
ಯೋಬನು 26
1 ಆಗ ಯೋಬನು ಹೀಗೆ ಉತ್ತರಕೊಟ್ಟನು,
2 “ನಿನ್ನಿಂದ ಅಶಕ್ತನಿಗೆ ಎಷ್ಟೋ ಸಹಾಯವಾಯಿತು! ಬಲಹೀನವಾದ ಕೈಗೆ ಮಹಾ ಸಹಾಯ ದೊರಕಿತು.
3 ಬುದ್ಧಿಯಿಲ್ಲದವನಿಗೆ ನೀನು ಹೇಳಿದ ಬುದ್ಧಿಯನ್ನು ಎಷ್ಟೆಂದು ಹೇಳಲಿ! ಸುಜ್ಞಾನವನ್ನು ಧಾರಾಳವಾಗಿ ಉಪದೇಶಿಸಿದ್ದಿ!
4 ಯಾರಿಗೆ ಮಾತುಗಳನ್ನು ಕಲಿಸಿದ್ದಿ? ನಿನ್ನಿಂದ ಹೊರಟ ನುಡಿಗಳನ್ನು ಯಾವ ಆತ್ಮವು ಪ್ರೇರೇಪಿಸಿತು?”
5 ಅದಕ್ಕೆ ಬಿಲ್ದದನು, “ಜಲಚರಗಳಿಂದ ತುಂಬಿರುವ ಸಾಗರದ ಕೆಳಗಿನ ಲೋಕದಲ್ಲಿ, ಪ್ರೇತಗಳು ಆತನ ಭಯದಿಂದ ಯಾತನೆಪಡುವವು.
6 ಪಾತಾಳವು ದೇವರ ದೃಷ್ಟಿಗೆ ತೆರೆದಿದೆ, ನಾಶಲೋಕವು ಮರೆಯಾಗಿಲ್ಲ.
7 ಆತನು ಶೂನ್ಯದ ಮೇಲೆ ಆಕಾಶದ ಉತ್ತರ ದಿಕ್ಕನ್ನು ವಿಸ್ತರಿಸಿ, ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗು ಹಾಕಿದ್ದಾನೆ.
8 ತನ್ನ ಮೇಘಗಳೊಳಗೆ ನೀರನ್ನು ತುಂಬಿ ಕಟ್ಟುವನು, ಯಾವ ಮೋಡವೂ ಅದರ ಭಾರದಿಂದ ಒಡೆದು ಹೋಗದು.
9 ತನ್ನ ಸಿಂಹಾಸನಕ್ಕೆ ಮರೆಯಾಗಿ, ಮುಂಭಾಗದಲ್ಲಿ ಮೋಡವನ್ನು ಕವಿಸಿರುವನು.
10 ಬೆಳಕು ಕತ್ತಲುಗಳ ಸಂಧಿಸ್ಥಾನದಲ್ಲಿ ಸಮುದ್ರದ ಮೇಲೆ, ಸುತ್ತಲೂ ಮೇರೆಯನ್ನೂ ಹಾಕಿದ್ದಾನೆ.
11 ಆಕಾಶಮಂಡಲದ ಸ್ತಂಭಗಳು, ಆತನ ಗದರಿಕೆಯಿಂದ ಬೆರಗಾಗಿ ಕದಲುವವು.
12 ಆತನು ತನ್ನ ವಿವೇಕ ಶಕ್ತಿಯಿಂದ ಘಟಸರ್ಪವನ್ನು ಹೊಡೆದುಹಾಕಿದನು; ತನ್ನ ಪರಾಕ್ರಮದಿಂದ ಸಾಗರವನ್ನು ಶಾಂತಗೊಳಿಸಿದನು.
13 ಆತನ ಶ್ವಾಸವು ಆಕಾಶಮಂಡಲವನ್ನು ಶುಭ್ರಮಾಡುವುದು, ಆತನ ಹಸ್ತವು ವೇಗವಾಗಿ ಓಡುವ ಸರ್ಪವನ್ನು ಇರಿಯುವುದು.
14 ಆಹಾ, ಈ ಅದ್ಭುತಗಳು ಆತನ ಮಾರ್ಗಗಳ ಕಟ್ಟಕಡೆಯಾಗಿವೆ. ಆತನ ವಿಷಯವಾಗಿ ಸೂಕ್ಷ್ಮ ಶಬ್ದವನ್ನು ಮಾತ್ರ ಕೇಳಿದ್ದೇವೆ, ಆತನ ಪ್ರಾಬಲ್ಯದ ಘನಗರ್ಜನೆಯನ್ನು ಯಾರು ಗ್ರಹಿಸಬಲ್ಲರು?”
Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0