ಬೈಬಲ್ · Indian Revised Version (Kannada) 2019

ಯೆಹೆಜ್ಕೇಲನು 15

1 ಯೆಹೋವನು ಈ ವಾಕ್ಯವನ್ನು ನನಗೆ ದಯಪಾಲಿಸಿದನು,

2 “ನರಪುತ್ರನೇ, ದ್ರಾಕ್ಷಿಯ ಗಿಡವು ಉಳಿದ ಗಿಡಗಳಿಗಿಂತ ಎಷ್ಟು ಹೆಚ್ಚು? ವನವೃಕ್ಷಗಳಲ್ಲಿ ದ್ರಾಕ್ಷಾಲತೆಯ ವಿಶೇಷವೇನು?

3 ಜನರು ದ್ರಾಕ್ಷಿಯ ಕಟ್ಟಿಗೆಯನ್ನು ತೆಗೆದುಕೊಂಡು ಅದರಿಂದ ಯಾವ ಕೆಲಸವನ್ನಾದರೂ ಮಾಡುವರೋ ಅಥವಾ ಅದರ ಮೇಲೆ ಯಾವ ವಸ್ತುವನ್ನಾದರೂ ನೇತು ಹಾಕುವುದಕ್ಕೆ ಅದರಿಂದ ಗೂಟವನ್ನು ಮಾಡಿಕೊಳ್ಳುವರೋ?

4 ಇಲ್ಲ, ಸೌದೆಯಾಗಿ ಬೆಂಕಿಯಲ್ಲಿ ಹಾಕುವರು; ಬೆಂಕಿಯು ಅದರ ಎರಡು ಕೊನೆಗಳನ್ನು ಸುಟ್ಟುಬಿಡುವುದು, ಮಧ್ಯಭಾಗವು ಇದ್ದಲಾಗಿ ಯಾವ ಕೆಲಸಕ್ಕೂ ಬರುವುದಿಲ್ಲ.

5 ಅದು ಸಂಪೂರ್ಣವಾಗಿ ಇದ್ದಾಗ ಯಾವ ಕೆಲಸಕ್ಕೂ ಬರಲಿಲ್ಲ; ಬೆಂಕಿಯಲ್ಲಿ ಸುಟ್ಟು ಇದ್ದಲಾದ ಮೇಲೆ ಯಾವ ಕೆಲಸಕ್ಕೆ ಬಂದೀತು?”

6 ಹೀಗಿರಲು ಕರ್ತನಾದ ಯೆಹೋವನು ಇಂತೆನ್ನುತ್ತಾನೆ, “ವನ ವೃಕ್ಷಗಳಲ್ಲಿ ದ್ರಾಕ್ಷಿಯ ಗಿಡವನ್ನು ನಾನು ಹೇಗೆ ಬೆಂಕಿಗೆ ಸೌದೆಯನ್ನಾಗಿ ಕೊಟ್ಟಿದ್ದೇನೋ, ಹಾಗೆಯೇ ನಾನು ಯೆರೂಸಲೇಮಿನವರನ್ನು ವಿನಾಶಕ್ಕೆ ಗುರಿಮಾಡಿದ್ದೇನೆ.

7 ಅವರ ಮೇಲೆ ಕೋಪ ದೃಷ್ಟಿಯನ್ನಿಡುವೆನು; ಅವರು ಬೆಂಕಿಯೊಳಗಿಂದ ತಪ್ಪಿಸಿಕೊಂಡರೂ, ಬೆಂಕಿಯು ಅವರನ್ನು ನುಂಗಿಬಿಡುವುದು; ನಾನು ಅವರ ಮೇಲೆ ಕೋಪ ದೃಷ್ಟಿಯನ್ನಿಡುವಾಗ ನಾನೇ ಯೆಹೋವನು ಎಂದು ನಿಮಗೆ ಗೊತ್ತಾಗುವುದು.

8 ಅವರು ದ್ರೋಹ ಮಾಡಿದ್ದರಿಂದ ನಾನು ದೇಶವನ್ನು ಹಾಳುಮಾಡುವೆನು” ಇದು ಕರ್ತನಾದ ಯೆಹೋವನ ನುಡಿ.

Indian Revised Version (Kannada) 2019 — © 2017, 2019 Bridge Connectivity Solutions — CC BY-SA 4.0